ಹ್ಯಾಶಿಂಗ್ ಅಥವಾ ಹ್ಯಾಶ್ ಫಂಕ್ಷನ್ (Hash Function) ಎನ್ನುವುದು ಯಾವುದೇ ದತ್ತಾಂಶವನ್ನು ನಿಗದಿತ ಉದ್ದದ ಹೆಕ್ಸಾಡೆಸಿಮಲ್ ಸಂಖ್ಯೆಯಾಗಿ (Hexadecimal number) ಪರಿವರ್ತಿಸುವ ಗಣಿತೀಯ ವಿಧಾನವಾಗಿದೆ. ಇದನ್ನು ಬಳಸಲು ಕೀಲಿಗಳ ಅಗತ್ಯವಿಲ್ಲ. ಇನ್‌ಪುಟ್ ದತ್ತಾಂಶದ ಉದ್ದ, ಗಾತ್ರ ಅಥವಾ ಪ್ರಕಾರ ಏನೇ ಇರಲಿ, ಹ್ಯಾಶ್ ಫಂಕ್ಷನ್ ನಿಗದಿತ ಉದ್ದದ ಹ್ಯಾಶ್ ಮೌಲ್ಯವನ್ನು ಮಾತ್ರ ನೀಡುತ್ತದೆ.

ಈ ನಿಗದಿತ ಉದ್ದದ ಸಂಖ್ಯಾ ಸರಣಿಯನ್ನು ಹ್ಯಾಶ್ ಮೌಲ್ಯ (Hash Value) ಅಥವಾ ಸಂದೇಶ ಸಾರಾಂಶ (Message Digest) ಎಂದು ಕರೆಯಲಾಗುತ್ತದೆ. ಇನ್‌ಪುಟ್‌ನಲ್ಲಿ ಒಂದು ಸಣ್ಣ ಬದಲಾವಣೆಯಾದರೂ ಹ್ಯಾಶ್ ಮೌಲ್ಯ ಬದಲಾಗುತ್ತದೆ. ಆದ್ದರಿಂದ ಹ್ಯಾಶ್ ಮೌಲ್ಯವನ್ನು ಅದರ ದತ್ತಾಂಶದ ಬೆರಳಚ್ಚಿನಂತೆ ಪರಿಗಣಿಸಲಾಗುತ್ತದೆ. ಹ್ಯಾಶ್ ಮೌಲ್ಯವನ್ನು ಡೀಕ್ರಿಪ್ಟ್ ಮಾಡಿ ಅದನ್ನು ಸೃಷ್ಟಿಸಿದ ಮೂಲ ಮಾಹಿತಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಈ ಕಾರಣದಿಂದ ಈ ವಿಧಾನವನ್ನು ಏಕಮುಖ ಗೂಢಲಿಪೀಕರಣ (One-Way Encryption) ಎಂದೂ ಕರೆಯಲಾಗುತ್ತದೆ.